ಯೋಜನೆ - ವಿನ್ಯಾಸ ಅನುಮೋದನೆ ಕಾರ್ಯವಿಧಾನ

ಯೋಜನೆ:-
ವಿನ್ಯಾಸ ಅನುಮೋದನೆ ಅನುಸರಿಸುವ ಕ್ರಮಗಳು
ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆಗಳನ್ವಯ ವಿನ್ಯಾಸ ಅನುಮೋದನೆ ನೀಡಲಾಗುತ್ತದೆ.
ಖಾಸಗಿ ವಿನ್ಯಾಸ ಅನುಮೋದನೆಗೆ ಈ ಕೆಳಗಿನಂತೆ ಕ್ರಮವಹಿಸಲಾಗುತ್ತದೆ.
ಹಾಲಿ ಸ್ಥಳ ಪರಿಸ್ಥಿತಿಯ ಬಗ್ಗೆ ಕಾಂಟೋರ್, ನೈಸರ್ಗಿಕ ಮತ್ತು ಟೋಪೋಗ್ರಾಫಿಕಲ್ ಕುರಿತು ಸರ್ವೆ ಮಾಡಿ, ಹಾಲಿ ರಸ್ತೆ, ಹಳ್ಳ, ಕಾಲುವೆ, ಅಧಿಕ ವಿದ್ಯುತ್ ತಂತಿಗಳ ಮಾಹಿತಿಗಳನ್ನೊಳಗೊಂಡ ಕರಡು ನಕ್ಷೆಯೊಂದಿಗೆ ಪ್ರಾಧಿಕಾರವು ಅರ್ಜಿಯನ್ನು ಈಕೆಳಗಿನ ದಾಖಲೆಗಳೊಂದಿಗೆ ಸ್ವೀಕರಿಸುವುದು.
ಮೂಲ: ಚಾಮರಾಜನಗರ-ರಾಮಸಮುದ್ರ ನಗರಾಭಿವೃದ್ಧಿ ಪ್ರಾಧಿಕಾರ, ಚಾಮರಾಜನಗರ.
1.  ಅನ್ಯಕ್ರಾಂತ ಆದೇಶ
2.  ಆರ್.ಟಿ.ಸಿ 
3.  ಅಟ್ಲಾಸ್ ನಕ್ಷೆ (ಮೂಲ ಪ್ರತಿ)
4.  ಇ.ಸಿ. ಮತ್ತು ಇತರೆ ಅಗತ್ಯ ದಾಖಲಾತಿ
5.  ಅರ್ಜಿ
6.  ಕ್ರಯಪತ್ರ
ಅಳತೆ 1:500 ಕ್ಕಿಂತ ಕಡಿಮೆ ಇಲ್ಲದ ವಿನ್ಯಾಸ ನಕ್ಷೆಯನ್ನು ಪ್ರತಿ ಅರ್ಜಿದಾರರು ಈ ಕೆಳಗಿನ ಮಾಹಿತಿಯೊಂದಿಗೆ ಪ್ರಾಧಿಕಾರಕ್ಕೆ ಸಲ್ಲಿಸುವುದು.
1. ಉಪ-ವಿಭಜನೆಯ ನಿವೇಶನ ಮತ್ತು ವಿವರವಾದ ಪ್ರಸ್ತಾವಿತ ಭೂಉಪಯೋಗ
2.    ಹಾಲಿ ರಸ್ತೆ ಸಂಪರ್ಕ ತೋರಿಸುವ ಸ್ಥಳ ನಕ್ಷೆ
3.    ಪ್ರತಿ ಉಪ-ವಿಭಜನೆ ನಿವೇಶನದ ಅಳತೆಗಳು
4.    ಪ್ರಸ್ತಾವಿತ ರಸ್ತೆ ಅಗಲ
5.    ಉದ್ಯಾನವನ/ಬಯಲುಜಾಗ ಮತ್ತು ನಾಗರೀಕ ಸೌಲಭ್ಯದ ನಿವೇಶದ ಅಳತೆಗಳನ್ನು ಒಳಗೊಂಡ ವಿನ್ಯಾಸ ನಕ್ಷೆ
     ಅರ್ಜಿದಾರರು ಅರ್ಜಿಯನ್ನು ಸಲ್ಲಿಸಿದ ನಂತರ ಅರ್ಜಿಯೊಂದಿಗೆ ಸಲ್ಲಿಸಿದ ದಾಖಲೆಗಳನ್ನು ಪರಿಶೀಲಿಸಿ, ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರನ್ವಯ ಅನುಮೋದನೆ ಪಡೆದ ಮಹಾಯೋಜನೆಯ ಪ್ರಸ್ತಾವನೆಯಂತೆ ಪ್ರಸ್ತಾವಿತ ಭೂಉಪಯೋಗ ಹಾಗೂ ವಲಯ ನಿಯಮಾವಳಿ ಮತ್ತು ಭೂ-ವಿಭಜನೆ ನಿಯಮಾವಳಿಗೆ ಅನುಗುಣವಾಗಿ ಕರಡು ವಿನ್ಯಾಸ ನಕ್ಷೆ ತಯಾರಿಸಲಾಗುವುದು. ಅಗತ್ಯವಿದ್ದಲ್ಲಿ ವಿನ್ಯಾಸ ನಕ್ಷೆಯನ್ನು ಹಾಲಿ ಭೂಮಿಯ ಸ್ಥಿತಿ, ಹಳ್ಳ, ನದಿ ಕಾಲುವೆಗನ್ನು ರಕ್ಷಿಸುವ ನಿಟ್ಟಿನಲ್ಲಿ ಹಾಗೂ ಪ್ರಸ್ತಾಪಿತ ರಸ್ತೆ ಜಾಲಗಳನ್ನು ಅವುಗಳ ಅಗಲಗಳ ಅನುಸಾರವಾಗಿ ಕರಡು ನಕ್ಷೆಯನ್ನು ಮಾರ್ಪಡಿಸಲಾಗುವುದು.
      ವಿನ್ಯಾಸ ನಕ್ಷೆ ಅನುಮೋದಿಸುವ ಮೊದಲು ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ಸೆಕ್ಷನ್ 18 ರನ್ವಯ ಮತ್ತು ಕರ್ನಾಟಕ ಯೋಜನಾ ಪ್ರಾಧಿಕಾರ ರೂಲ್ಸ್ 1965, ರೂಲ್ 37(ಎ) ರನ್ವಯ ಅಗತ್ಯ ಶುಲ್ಕಗಳನ್ನು ಪಾವತಿಸುವಂತೆ ಅರ್ಜಿದಾರರಿಗೆ ಸೂಚನಾ ಪತ್ರವನ್ನು ನೀಡಲಾಗುವುದು. ಪ್ರಾಧಿಕಾರದ ಕಾಮಗಾರಿ ಶಾಖೆಯಿಂದ ಸಿವಿಲ್ ಕಾಮಗಾರಿಗಳ ಬಗ್ಗೆ ಕಾಮಗಾರಿಯ ಅಂದಾಜು ಪಟ್ಟಿಯನ್ನು ಮೆಸ್ಕಾಂ ನಿಂದ, ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿ ಅಂದಾಜುಪಟ್ಟಿಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯಿಂದ ಹಾಗೂ ಉದ್ಯಾನವನ/ಬಯಲು ಜಾಗ ಕಾಮಗಾರಿ ಅಂದಾಜು ಪಟ್ಟಿಯನ್ನು ತೋಟಗಾರಿಕಾ ಇಲಾಖೆಯಿಂದ ಪಡೆಯುವುದಾಗಿದೆ. ಈ ಎಲ್ಲಾ ಕಾಮಗಾರಿಗಳನ್ನು ಸಂಬಂಧಿಸಿದ ಇಲಾಖೆಯ ವತಿಯಿಂದ ನಿರ್ವಹಿಸಲು ಅರ್ಜಿದಾರರು ಇಚ್ಛಿಸಿದಲ್ಲಿ ಕಾಮಗಾರಿಯ ಪೂರ್ಣ ಅಂದಾಜು ವೆಚ್ಚವನ್ನು ಸಂಬಂಧಪಟ್ಟ ಇಲಾಖೆಗಳಿಗೆ ಭರಿಸಬೇಕಾಗುತ್ತದೆ. ಅರ್ಜಿದಾರರರೇ ಸ್ವಂತವಾಗಿ ಅಭಿವೃದ್ಧಿಪಡಿಸಲು ಇಚ್ಛಿಸಿದ್ದಲ್ಲಿ ಪರಿಶೀಲನಾ ಶುಲ್ಕಗಳನ್ನು ಆಯಾ ಇಲಾಖೆಗಳಿಗೆ ಭರಿಸಿ, ನೋಂದಣಿಯಾದ ಖಾಸಗಿ ಗುತ್ತಿಗೆದಾರರಿಂದ ಕಾಮಗಾರಿಯನ್ನು ಆಯಾ ಇಲಾಖೆಗಳ ಮೇಲ್ವಿಚಾರಣೆಯಲ್ಲಿ ನಡೆಸಬೇಕಾಗುತ್ತದೆ.
       ಅರ್ಜಿದಾರರು ಸ್ವಂತವಾಗಿ ಕಾಮಗಾರಿ ಕೈಗೊಂಡಲ್ಲಿ ಸಿವಿಲ್ ಕಾಮಗಾರಿಯ ಅಂದಾಜು ವೆಚ್ಚದ ಶೇ 4 ರಷ್ಟು ಹಾಗೂ ಶೇ 17.5 ಇ.ಟಿ.ಪಿ ಶುಲ್ಕಗಳನ್ನು ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 32 ರನ್ವಯ ಭರಿಸಬೇಕಾಗುವುದು. ಕರ್ನಾಟಕ ನಗರ ಮತ್ತು ಗ್ರಾಮಾಂತರ ಯೋಜನಾ ಕಾಯ್ದೆ 1961 ರ ನ್ವಯ ಹಾಗೂ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ 1987 ರನ್ವಯ ಅಗತ್ಯ ಶುಲ್ಕಗಳನ್ನು ಮತ್ತು ಅಭಿವೃದ್ಧಿ ಶುಲ್ಕಗಳನ್ನು ಪಡೆದ ನಂತರ, ಮಾದರಿ ವಿನ್ಯಾಸ ನಕ್ಷೆಯನ್ನು ಅನುಮೋದಿಸಲಾಗುವುದು. ಪ್ರಸ್ತಾವಿತ ವಿನ್ಯಾಸದ ಎಲ್ಲಾ ಕಾಮಗಾರಿಗಳನ್ನು ಸಂಬಂಧಿಸಿದ ಇಲಾಖೆಗಳ ಮೇಲ್ವಿಚಾರಣೆಯಲ್ಲಿ ಪೂರ್ಣಗೊಳಿಸಿದ ನಂತರ, ವಿನ್ಯಾಸ ದಲ್ಲಿನ ರಸ್ತೆಗಳನ್ನು ಉದ್ಯಾನವನ/ಬಯಲುಜಾಗ ಮತ್ತು ನಾಗರೀಕ ಸೌಲಭ್ಯದ ನಿವೇಶನಗಳನ್ನು ಸಂಬಂಧಿಸಿದ ಪ್ರಾಧಿಕಾರ ಅಥವಾ ಸ್ಥಳೀಯ ಸಂಸ್ಥೆಗಳಿಗೆ ಮಾಲೀಕತ್ವವನ್ನು ನೀಡಿ ನೋಂದಣಿ ಮಾಡಿಕೊಡಬೇಕಾಗಿರುತ್ತದೆ.
     ಅರ್ಜಿದಾರರು ಸ್ವಂತವಾಗಿ ವಿನ್ಯಾಸದ ಎಲ್ಲಾ ಕಾಮಗಾರಿಗಳನ್ನು ಸಂಬಂಧಿಸಿದ ಇಲಾಖೆಗಳ ಮೇಲ್ವಿಚಾರಣೆಯಲ್ಲಿ ಪೂರ್ಣಗೊಳಿಸಿದ ನಂತರ ಸಿವಿಲ್ ಕಾಮಗಾರಿ, ವಿದ್ಯುತ್ ಕಾಮಗಾರಿ, ನೀರು ಸರಬರಾಜು ಮತ್ತು ಒಳಚರಂಡಿ ಕಾಮಗಾರಿ ಮತ್ತು ಉದ್ಯಾನವನ ಕಾಮಗಾರಿ ಪೂರ್ಣಗೊಳಿಸಿದ ಬಗ್ಗೆ ಸಂಬಂಧಪಟ್ಟ ಇಲಾಖೆಗಳಿಂದ ದೃಢೀಕರಣ ಪತ್ರಗಳನ್ನು ಪ್ರಾಧಿಕಾರಕ್ಕೆ ಸಲ್ಲಿಸಬೇಕಾಗಿರುತ್ತದೆ. ಅರ್ಜಿದಾರರು ಎಲ್ಲಾ ಕಾಮಗಾರಿಗಳನ್ನು ಅಂದಾಜುಪಟ್ಟಿಯಂತೆ ಪೂರ್ಣಗೊಳಿಸಿ, ಸಂಬಂಧಿಸಿದ ಇಲಾಖೆಗಳಿಂದ ಕಂಪ್ಲೀಶನ್ ಪ್ರಮಾಣ ಪತ್ರ ಸಲ್ಲಿಸಿದ ನಂತರ ಪ್ರಾಧಿಕಾರದಿಂದ ಅ0ತಿಮ ವಿನ್ಯಾಸ ಬಿಡುಗಡೆ ಮಾಡಲಾಗುತ್ತದೆ.
ಖಾಸಗಿ ಅಭಿವೃದ್ಧಿ ದಾರರು ಸಂಬಂಧಿಸಿದ ಪ್ರಾಧಿಕಾರ/ಇಲಾಖೆಗಳ ನಿರಾಕ್ಷೇಪನಾ ಪತ್ರ ಸಲ್ಲಿಸಬೇಕಾಗಿದೆ.
ಖಾಸಗಿ ಅಭಿವೃದ್ಧಿದಾರರು ಘನ ತ್ಯಾಜ್ಯ ನಿರ್ವಹಣೆಯ ನಿಯಮಾವಳಿಯನ್ನು ಪಾಲಿಸತಕ್ಕದ್ದು.
     ಅರ್ಜಿದಾರರು ಎಲ್ಲಾ ಅಭಿವೃದ್ಧಿ ಕಾಮಗಾರಿಗಳನ್ನು ನಿರ್ವಹಿಸಿ, ರಸ್ತೆ, ಉದ್ಯಾನವನ ಮತ್ತು ನಾಗರೀಕ ಸೌಲಭ್ಯದ ನಿವೇಶನಗಳನ್ನು ಪ್ರಾಧಿಕಾರ/ಸ್ಥಳಿಯ ಸಂಸ್ಥೆಗಳಿಗೆ ಕರ್ನಾಟಕ ನಗರಾಭಿವೃದ್ಧಿ ಪ್ರಾಧಿಕಾರಗಳ ಕಾಯ್ದೆ ಸೆಕ್ಷನ್ 32 ರನ್ವಯ ಹಸ್ತಾಂತರಿಸಿದ ನಂತರ ಸರ್ಕಾರದ ಅಧಿಸೂಚನೆ ಸಂವ್ಯಶಾಇ 24 ಶಾಸನ 2015, ಬೆಂಗಳೂರು, ದಿನಾಂಕ: 10-09-2015 ರನ್ವಯ ನಿವೇಶನಗಳನ್ನು ಬಿಡುಗಡೆಗೊಳಿಸಲಾಗುತ್ತದೆ.

 

ಮೂಲ: ಚಿಕ್ಕಬಳ್ಳಾಪುರ ನಗರಾಭಿವೃದ್ಧಿ ಪ್ರಾಧಿಕಾರ, ಚಿಕ್ಕಬಳ್ಳಾಪುರ.